ನನ್ನ ಪುಟ
ಪಯಣ
ಕೆಲಸಕ್ಕೆ ಬಾರದ ಯೋಚನೆ ಮಾಡುತ್ತಾ, ಹೆಚ್ಚು ಕಡಿಮೆ ಆಮೆ ವೇಗದಲ್ಲಿ ನಡೆಯುವ ನನ್ನನ್ನು ಕಂಡುಬಿಟ್ಟರೆ, ಆ ಕ್ಷಣಕ್ಕೆ ಎಂಥವರಿಗಾದರೂ ಅನ್ನಿಸಿಬಿಡುತ್ತದೆ ನಾನೊಬ್ಬ ಶುದ್ಧ ಸೋಮಾರಿ ಎಂಬುದು ! ಈ ರೀತಿ ನಡೆಯುವ ಶೈಲಿ, sslc ನಪಾಸು ಆದ ದಿನದಿಂದ ಇಲ್ಲಿಯವರೆಗೆ ಚಾಚೂತಪ್ಪದೆ ರೂಢಿಸಿಕೊಂಡು ಬಂದ ಪದ್ಧತಿ.
ಹೀಗೆ ನಿಧಾನವಾದ ನನ್ನ ನಡಿಗೆ, ಅಂದು ಮಾತ್ರ ಅತಿ ವೇಗ ಪಡೆದುಕೊಂಡುಬಿಟ್ಟಿತ್ತು. ಅದಕ್ಕೂ ಕೆಲವು ಕಾರಣಗಳಿವೆ. ಬೇಸರ, ಕಾತರ ಹಾಗೂ ಕುತೂಹಲದ ಬೆನ್ನುಹತ್ತಿದ್ದ ಹುಚ್ಚು ಮನಸ್ಸು ನನಗರಿವಿಲ್ಲದಂತೆ ಭರದಿಂದ ಸಾಗುವಂತೆ ಮಾಡಿತ್ತು.
ಮೊದಲ pucಯ ಅಂತಿಮ ದಿನಗಳವು. ನಮ್ಮ ಉಪದ್ರವ ತಡೆಯಲಾರದೆ ಪರೀಕ್ಷೆ ಬರೆಯಿಸಿದ ಕಾಲೇಜು, ಬೇಸಿಗೆ ನೆಪದಲ್ಲಿ ತಿಂಗಳ ಕಾಲ ರಜೆ ಘೋಷಿಸಿಬಿಟ್ಟಿತು. ಎಡವಟ್ಟು ಕೆಲಸ ಬಿಟ್ಟರೆ ಮಾಡಲು ಬೇರೆ ಕೆಲಸವಿರಲಿಲ್ಲ. ಅಪ್ಪ ಅಮ್ಮನ ಮಾತು ಮೊದಲೇ ಕೇಳುತ್ತಿರಲಿಲ್ಲ. ಬೇಸತ್ತು ``ಊರಿಗೆ ಹೋರಡು'' ಎಂದು ಕಟ್ಟಪ್ಪಣೆ ಮಾಡಿಯೇ ಬಿಟ್ಟರು ನನ್ನ ಪೋಷಕರು. ಅಮ್ಮನ ಬಯ್ಗುಳ ತಪ್ಪಿತಲ್ಲ ಎಂಬ ಒಂದೇ ಕಾರಣಕ್ಕೆ ಬೆಂಗಳೂರಿನಿಂದ ನನ್ನ ಹುಟ್ಟೂರು ಬಿಜೂರಿಗೆ ಬಂದುಬಿಟ್ಟೆ.
ಆಗಮಿಸಿದ ಮೂದಲ ದಿನ ಆದರದಿಂದ ಸ್ವಾಗತಿಸಿದ ಅಜ್ಜಿ ತಾತ, ಎರಡನೆ ದಿನವೇ ವಾಪಸ್ಸು ಕಳಿಸುವ ಯೋಚನೆಗೆ ಬಿದ್ದುಬಿಟ್ಟರು. ಅಷ್ಟರ ಮಟ್ಟಿಗೆ ನನ್ನ ಪುಂಡಾಟದ ವೈಖರಿಯ ಪರಿಚಯವಾಗಿಬಿಟ್ಟಿತ್ತು. ಅಜ್ಜಿ ತಾತಂದಿರು ಮಕ್ಕಳಂತೆ ಎಂಬ ಮಾತು ಕೇಳಿದ್ದೆ. ಆದರೆ ನನ್ನ ಅಜ್ಜಿ ತಾತ ಸಾಕ್ಷಾತ್ ಮಕ್ಕಳೇ ಆಗಿ ಬಿಟ್ಟಿದ್ದರು. ಅದ್ಯಾವ ಪರಿ ಮಕ್ಕಳಾಗಿದ್ದರೆಂದರೆ, ಅದುಬೇಡ, ಇದುಬೇಡ ಎಂಬ ಒಂದೇ ಹಟ ಒಂದೇ ಗಲಾಟಿ. ಹಿರಿಯರ ಬೈಗುಳಕ್ಕೆ ಮನನೊಂದು ಪ್ರೀತಿಯ ಗೋವಿನೂಂದಿಗೆ ನನ್ನ ಅಳಲನ್ನು ತೋಡಿಕೂಳ್ಳುತ್ತಾ ಕುಳಿತುಬಿಟ್ಟೆ. ನೋಡುವಷ್ಟು ನೋಡಿದ ಅದು ಅಲ್ಲಿಂದ ಜಾಗ ಖಾಲಿ ಮಾಡಿ ಅನತಿ ದೂರದ ನದಿಯ ತೀರದೆಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿತು. ಅದು ಸಾಗುವುದನ್ನೇ ಗಮನಿಸುತ್ತಿದ್ದ ನನಗೆ ಥಟ್ಟನೆ ನೆನಪಾದದ್ದು ``ಸೋಮೇಶ್ವರ''!.
ಪುಟ್ಟ ಹುಡುಗನಿದ್ದಾಗಲಿಂದ ಹತ್ತಾರು ರೊಮಾಂಚನಕಾರಿ ವಿಷಯಗಳನ್ನು ಆಲಿಸಿ ಸೋಮೇಶ್ವರದ ಬಗೆಗೆ Impress ಆಗಿದ್ದೆ. ಅಜ್ಜಿ ತಾತಂದಿರ ಹಟಕ್ಕೆ ತತ್ತರಿಸಿದ ಮನಸ್ಸು, ಸೋಮೇಶ್ವರಕ್ಕೆ ಹೋಗಿಯೇ ತೀರಬೇಕೆಂಬ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಂದು ಸಂಪೂರ್ಣವಾಗಿ ಯಶಸ್ವಿ ಆಗಿತ್ತು. ಪಯಣದ ಗುಟ್ಟು ಬಯಲಾದರೆ ಹಿರಿಯ ತಲೆಗಳ ಕಾಟ ತಪ್ಪಿದಲ್ಲ ಎಂದುಕೂಂಡು ಅಲ್ಲಿಂದ ಸದ್ದಿಲ್ಲದೆ ಕಾಲ್ಕಿತ್ತೆ. ಬಿಜೂರಿನಿಂದ ಸರಿಸುಮಾರು 5 ಕಿ.ಮೀ. ದೂರದಲ್ಲಿದೆ ಸೋಮೇಶ್ವರ. ಅವರಿವರನ್ನು ಕೇಳಿಕೊಂಡು ನನ್ನ ಸೋಮೇಶ್ವರದ ಪಯಣ ಕಾಲುನಡಿಗೆಯಲ್ಲಿಯೇ ಪ್ರಾರಂಭವಾಯಿತು. ಹುಟ್ಟು ಸೋಮಾರಿಯಂತೆ ನಡೆಯುವ ನಾನು ಅಂದು ಮಾತ್ರ ಹೆಚ್ಚೇ ಎನ್ನುವಷ್ಟರ ಮಟ್ಟಿಗೆ ತರಾತುರಿಯಲ್ಲಿ ನಡೆದುಬಿಟ್ಟಿದ್ದೆ.
ನಾನು ಕಾಣಬೇಕೆಂದು ಹಾತೂರೆಯುತ್ತಿದ್ದ ಸ್ಥಳ Almost ಕಡಲು ಪ್ರದೇಶ. ತೀರ ಹತ್ತಿರ ಬರುತ್ತಿದ್ದಂತೆ ಕಿವಿಗಪ್ಪಳಿಸುವ ಅಲೆಗಳ ಸದ್ದು, ಸಮುದ್ರದೆಡೆಗೆ ಸ್ವಾಗತಿಸುವ ತಂಪಾದ ಗಾಳಿ, ಆಸೀನರಾಗಿ ಎಂಬಂತೆ ಕೈ ಬೀಸಿ ಕರೆಯುವ ಕಪ್ಪು ಕಲ್ಲಿನ ಆಸನಗಳು, ಕಪ್ಪೆ ಚಿಪ್ಪು ಮಿಶ್ರಿತ ಯಾರೊಬ್ಬರೂ ಸುಳಿದಾಡದ ಮರಳಿನ ತೀರ, ತೀರದುದ್ದಕ್ಕೂ ಸಾಗಿದ ತೆಂಗಿನ ಮರಗಳ ಸಾಲು, ಸಾಗರದ ಅಲೆಗಳು ಸ್ಪರ್ಶಿಸುವಂತೆ ರಚಿತವಾದ ಸೋಮೇಶ್ವರನ ದೇವಾಲಯ. ``ವಾಹ್ '' ಈ ಎಲ್ಲಾ ಅದ್ಭುತಗಳು ಒಟ್ಟಿಗೆ ಸೇರಿ ಅಂದು ನನ್ನನ್ನು ಆ ಸ್ಥಳದ ಹುಚ್ಚು ಅಭಿಮಾನಿಯನ್ನಾಗಿ ಮಾಡಿಬಿಟ್ಟವು. ಕಂಡಿದ್ದೇ ತಡ, ಕೂಗಾಡಿ, ಮರಳಲ್ಲಿ ಓಡಾಡಿ, ಒದ್ದಾಡಿ, ಉಪ್ಪು ನೀರಲ್ಲಿ ಮನಸೋ ಇಚ್ಛೆ ತೇಲಾಡಿಬಿಟ್ಟೆ. ಆ ದಿನದ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.
ಸೋಮೇಶ್ವರ ಬೀಚ್
ನಾನು ಭೇಟಿ ನೀಡಿದ ಸಂದರ್ಭ ದೇವಾಲಯದ ಸೋಮೇಶ್ವರನ ಯೋಗಕ್ಷೇಮ ವಿಚಾರಿಸಲು ಯಾರೊಬ್ಬರೂ ದಿಕ್ಕಿರಲಿಲ್ಲ. ಸ್ವರ್ಗದಲ್ಲಿ ದೇವರನ್ನು ಕಂಡವನಂತೆ ಅಂದು ಈಡೀ ದೇವಾಲಯದಲ್ಲಿ ಓಡಾಡಿದ್ದೆ. ಅಂತಿಮವಾಗಿ ದೇವರೊಂದಿಗೆ ಕಷ್ಟ ಸುಖ ಮಾತನಾಡಿಕೊಂಡು ನನ್ನ ಪಯಣ ಮುಗಿಸಿ ಮನೆಗೆ ಮರಳಿದಾಗ ಕತ್ತಲು ಆವರಿಸಿತ್ತು. ನನ್ನ ಬರುವಿಕೆಗಾಗಿಯೇ ಅಜ್ಜಿ ತಾತ ಮನೆಯ ಬಾಗಿಲಿನಲ್ಲಿ ಕಾದು ನಿಂತಿದ್ದರು. ಮುಂದೆ ಏನಾಯ್ತು ಅನ್ನೋದನ್ನ ಮಾತ್ರ ಟೈಪ್ ಮಾಡೋದಿಲ್ಲ ಕ್ಷಮಿಸಿ.
ಅನಾದಿ ಕಾಲದ ಸೋಮೇಶ್ವರ ದೇವಾಲಯದ ಒಳಾಂಗಣ ವಿನ್ಯಾಸ ಕಣ್ಮನ ಸೆಳೆಯುವಂತಿದೆ. ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ಈ ದೇವಾಲಯದ ಬಲಭಾಗದಲ್ಲಿ ಸಿಹಿ ನೀರಿನ ಝರಿ ಹರಿಯುತ್ತದೆ. ತಿಳಿದಂತೆ ಕಡಲ ತೀರದ ನೀರು ಉಪ್ಪು ಆದರೆ ಈ ಹರಿಯುವ ಝರಿ ಮಾತ್ರ ಸಿಹಿ. ನಂಬಲು ಅಸಾಧ್ಯವೆನಿಸಿದರೂ ಇದು ಸತ್ಯ! ಈ ಸ್ಥಳದ ಇತಿಹಾಸ ಕೆದಕಬೇಕೆಂಬ ನನ್ನ ಆಸೆ ಇಗಲೂ ಆಸೆಯಾಗಿಯೇ ಉಳಿದಿದೆ. ಸುತ್ತ ಮುತ್ತಲ ಜನರನ್ನು ಪ್ರಶ್ನಿಸಿದಲ್ಲಿ ಸಿಗುವ ಉತ್ತರ ``ಗೊತ್ತಿಲ್ಲ''. ಚೂರು ಪಾರು ತಿಳಿದಿದ್ದವರು ಅದಾಗಲೇ ಸೋಮೇಶ್ವರನ ಪಾದ ಸೇರಿಕೊಂಡುಬಿಟ್ಟಿದ್ದಾರೆ.
ಸೋಮೇಶ್ವರ ದೇವಾಲಯದ ಒಳಭಾಗದ ವಿಹಂಗಮ ನೋಟ
ಪದೇ ಪದೇ ನಾನು ಇಲ್ಲಿಗೆ ಬರುವುದುಂಟು. ಅಷ್ಟರ ಮಟ್ಟಿಗೆ ಈ ಸ್ಥಳ ನನಗೆ ಅಚ್ಚು ಮೆಚ್ಚು. ದಾರಿ ತಪ್ಪಿ ಕೆಲವು ಪ್ರವಾಸಿಗರು ಇತ್ತ ಬರುವುದಿದೆ. ಸಾಧ್ಯವಾದಲ್ಲಿ ನೀವೂ ಒಮ್ಮೆ ಬಂದು ಹೋಗಿ. ಒಂದೊಮ್ಮೆ ನೀವು ಇಲ್ಲಿಗೆ ಬಂದಲ್ಲಿ, ಆಗಮಿಸಿದ್ದಕ್ಕೂ ಸಾರ್ಥಕವಾಯಿತು ಎನ್ನಿಸದೇ ಇರದು. ಬಸ್ಸಿಗೆ ಬರವಿಲ್ಲದ ಊರು ಕುಂದಾಪುರದಿಂದ ಬೈ೦ದೂರಿಗೆ ಕೇವಲ 30 ಕಿ.ಮೀ.ಗಳು. ಬೈ೦ದೂರಿನಿಂದ ಒಳದಾರಿಯಲ್ಲಿ ಸೋಮೇಶ್ವರಕ್ಕೆ 2 ಕಿ.ಮೀ.ಪ್ರಯಾಣ ಬೆಳಸಬೇಕು. ಅಲ್ಲದೆ ಇಲ್ಲಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿರುವ ಕೊಲ್ಲೂರು, ಮುರುಡೇಶ್ವರ, ತ್ರಾಸಿ ಬೀಚ್ ಪ್ರವಾಸೀ ತಾಣಗಳಿಗೂ ಸಹ ಭೇಟಿ ನೀಡಬಹುದು.
ಬೀಚ್ ವೀಡಿಯೊ
ಈ ಸ್ಥಳದ ಬಗೆಗೆ ಅಂತಿಮವಾಗಿ ಉಳಿದುಕೊಂಡ ಒಂದು ಆಸೆಯಿದೆ. ಇಂತ ಹುಡುಗಿಯನ್ನೇ ಮದುವೆಯಾಗಬೇಕೆಂಬ ಕನಸನ್ನು ಎಂದೂ ಕಂಡವನಲ್ಲ. ಕಾಣುವವನೂ ಅಲ್ಲ. ಮದುವೆ ಅಂತ ಆದಲ್ಲಿ ಇದೇ ಸೋಮೇಶ್ವರನ ಸನ್ನಿಧಿಯಲ್ಲಿ ನಾನು ನನ್ನಾಕೆಯ ಕೈ ಹಿಡಿಯಬೇಕು. ನವದಂಪತಿಗಳಿಬ್ಬರೂ ಅದೇ ಕಡಲ ಮರಳ ತೀರದಲ್ಲಿ ಮರೆಯಾಗುವಷ್ಟು ದೂರ ಓಡುತ್ತಲೇ ಇರಬೇಕು.............
ಸದಾ ಮನದಲ್ಲಿ ಗುನುಗುವ ಗೀತೆ
ಮರೆಯದ ಚಿತ್ರ
ಚಿತ್ರ: ಫಾನ್ ಚಾನ್
ಭಾಷೆ: ಥಾಯಿ
ಬಿಡುಗಡೆ: 03 ಆಕ್ಟೋಬರ್ 2003 (ಥೈಲ್ಯಾಂಡ್)
ನಿರ್ದೇಶನ: ವಿಚಾ ಗೊಜೀವ್
ತಾರಾಗಣ: ಚಾರ್ಲಿ ಟ್ರೈರಾಟ್ , ಫೋಕಸ್ ಜಿರಾಕುಲ್
`ಫಾನ್ ಚಾನ್ ' ಚಿತ್ರ ನೋಡಿದಾಕ್ಷಣ ಖಾತರಿಯಾಗಿಬಿಡುತ್ತದೆ, ನಿರ್ದೇಶಕರು ಮಕ್ಕಳ ಬಗೆಗೆ ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿದ್ದರೆಂಬುದು. ಪುಟಾಣಿಗಳ ಸ್ನೇಹ, ಆಟ, ಪಾಠ, ಕಿತ್ತಾಟ, ಎಲ್ಲವನ್ನೂ ಬೆರಸಿ ಸೊಗಸಾದ ಚಿತ್ರವೊಂದನ್ನು ಸಿನಿಮಾ ಪ್ರಿಯರಿಗೆ ಉಣಬಡಿಸಿದ್ದಾರೆ ಖ್ಯಾತ ಥಾಯಿ ನಿರ್ದೇಶಕ ವಿಚಾ ಗೊಜೀವ್.
ಬಾಲ್ಯದ ಸ್ನೇಹಿತೆ ನೋಯ್ ನಾಳ ವಿವಾಹ ಆಮಂತ್ರಣ ದೊರೆತು ನಾಯಕ ಜೀಯಬ್ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತ ಮದುವೆಗೆ ಹೊರಡುವ ಮೂಲಕ ಚಿತ್ರದ ಕಥೆ ಪ್ರಾರಂಭವಾಗುತ್ತದೆ.
ಫೋಕಸ್ ಜಿರಾಕುಲ್, ಚಾರ್ಲಿ ಟ್ರೈರಾಟ್ (ಫಾನ್ ಚಾನ್ ಚಿತ್ರ)
ಪುಟ್ಟ ಜೀಯಬ್(ಚಾರ್ಲಿ ಟ್ರೈರಾಟ್) ಹಾಗೂ ನೋಯ್ ನಾ(ಫೋಕಸ್ ಜಿರಾಕುಲ್)ಳ ಲವಲವಿಕೆಯ ನಟನೆಯ ಮೂಲಕ ಮುಕ್ಕಾಲು ಭಾಗ ಚಿತ್ರ ಮನರಂಜನೆಯಿಂದ ತುಂಬಿ ತುಳುಕುತ್ತದೆ. ಜೀಯಬ್ ಹಾಗೂ ನೋಯ್ ನಾಳ ಬಿಡಿಸಲಾಗದ ಸ್ನೇಹವೇ ಈ ಚಿತ್ರದ ಹೈಲೈಟ್. ಜಾಕ್ ಎಂಬ ಪುಟ್ಟ ವಿಲನ್ ನ ಎಂಟ್ರಿಯ ಮೂಲಕ ಹೊಸ ತಿರುವು ಪಡೆದುಕೊಳ್ಳುವ ಚಿತ್ರ, ಜೀಯಬ್ ಹಾಗೂ ನೋಯ್ ನಾಳ ನಡುವೆ ಮನಸ್ತಾಪ ಉಂಟಾಗಿ ಸ್ವಲ್ಪ ಮಟ್ಟಿಗೆ ವೀಕ್ಷಕರನ್ನು ಬೇಸರಕ್ಕೆ ತಳ್ಳುತ್ತದೆ ಎನ್ನುವುದು ಬಿಟ್ಟರೆ ಮತ್ತೆಲ್ಲೂ ಬೇಸರವೆನಿಸುವ ದೃಶ್ಯಗಳಿಲ್ಲ. ಕ್ಲೈಮ್ಯಾಕ್ಸ್ ನ ಕೆಲವೇ ನಿಮಿಷಗಳ ಹಿಂದೆ ನೋಯ್ ನಾ ತನ್ನ ಪೋಷಕರೊಂದಿಗೆ ಪರ ಊರಿಗೆ ವಲಸೆ ಹೋಗುವ ಸಂದರ್ಭ ಎದುರಾಗಿಬಿಡುತ್ತದೆ. ತನ್ನ ಪ್ರಾಣ ಸ್ನೇಹಿತೆಗೆ ಅಂತಿಮ ಬಿಳ್ಕೊಡುಗೆ ಕೊಡಬೇಕೆಂದು ಜೀಯಬ್ ತನ್ನ ಸ್ನೇಹಿತರೊಂದಿಗೆ ಎಲ್ಲಿಲ್ಲದ ಸರ್ಕಸ್ ಮಾಡುತ್ತಾನೆ. ಕೊನೆಗೂ ನೋಯ್ ನಾಳನ್ನು ಅಂತಿಮವಾಗಿ ನೋಡುವ ಭಾಗ್ಯ ಜೀಯಬ್ ಗೆ ಒದಗಿ ಬರುವುದೇ ಇಲ್ಲ.
ಕೊನೆಯದಾಗಿ ನೋಯ್ ನಾಳನ್ನು ಕಾಣಬೇಕೆಂಬ ಜೀಯಬ್ ನ ಹಂಬಲ, ಆತನಿಗೆ ಸಾಥ್ ನೀಡುವ ಎಡವಟ್ಟು ಸ್ನೇಹಿತರು ಈ ಎಲ್ಲಾ ದೃಶ್ಯಗಳು ವೀಕ್ಷಕರನ್ನು ಅತ್ತಿತ್ತ ತಿರುಗದಂತೆ ಮಾಡಿಬಿಡುತ್ತವೆ.
ಚಿತ್ರದ ಹಾಡೊಂದರ ತುಣುಕು
ಈ ಎಲ್ಲಾ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡು ನೋಯ್ ನಾಳ ಮದುವೆಗೆ ಉಡುಗೊರೆಯೊಂದಿಗೆ ಆಗಮಿಸುವ ಹರೆಯದ ಜೀಯಬ್ ಮದುಮಗಳಾದ ನೋಯ್ ನಾಳನ್ನು ಭೇಟಿ ಮಾಡುತ್ತಾನಾ ? ಇದನ್ನು ತಿಳಿಯಬೇಕಾದರೆ ಖುದ್ದು ನೀವೇ ಈ ಚಿತ್ರವನ್ನು ವೀಕ್ಷಿಸಿ. ಅಂತರ್ಜಾಲದಲ್ಲಿ ಈ ಚಿತ್ರವನ್ನು ಜಾಲಾಡುವುದು ಕಷ್ಟಕರವಲ್ಲ ಎಂದು ಭಾವಿಸಿದ್ದೆನೆ.
ತೋಚಿದ್ದು .. ಟೈಪ್ ಮಾಡಿದ್ದು
ಕನಸಿನಲಿ ಬಂದ ಚೆಲುವೆ
ಕಣ್ಣೆದುರಿಗೆ ಬಂದಾಗ
ಕನಸೊ ನನಸೋ ಎಂಬಂತಾಗಿ
ಮನಸು ಮಾತಾಡಿತು ಅವಳ ಮಾತಾಡಿಸು ಎಂದಿತು .....